ಬೇಕನ್, ಫ್ರಾನ್ಸಿಸ್
1561-1616. ಇಂಗ್ಲಿಷ್ ಗದ್ಯ ಸಾಹಿತಿ, ತತ್ತ್ವಶಾಸ್ತ್ರಜ್ಞ. ರಾಜಕಾರಣಿ. 1561 ಜನವರಿ 22ರಂದು ಲಂಡನ್‍ನಲ್ಲಿ ಜನಿಸಿದ. ಇವನ ತಂದೆ ಸರ್‍ನಿಕೋಲಸ್ ಬೇಕನ್. ಬೇಕನ್ ಎರಡು ವರ್ಷ ಕೇಂಬ್ರಿಜ್‍ನಲ್ಲಿ, ಮೂರು ವರ್ಷ ಫ್ರಾನ್ಸ್‍ನಲ್ಲಿ ವಿದ್ಯಾಭ್ಯಾಸ ನಡೆಸಿ 1579ರಲ್ಲಿ ತಂದೆ ನಿಧನನಾದಾಗ ವಿದ್ಯಾಭ್ಯಾಸ ತೊರೆದ. ಅನಂತರ ಮತ್ತೆ ವ್ಯಾಸಂಗ ಮುಂದುವರಿಸಿ ಕಾನೂನು ಪದವಿ ಗಳಿಸಿದ. 1584ರಲ್ಲಿ ಪಾರ್ಲಿಮೆಂಟಿನ ಸದಸ್ಯನಾದ. 1618ರಲ್ಲಿ ಲಾರ್ಡ್ ಚಾನ್ಸೆಲರ್ ಆದ. 1621ರಲ್ಲಿ ಭ್ರಷ್ಟಾಚಾರದ ಆರೋಪದಿಂದ ಪದವಿ ಕಳೆದುಕೊಂಡು ಸೆರಮನೆಯಲ್ಲಿ ಕೆಲವು ದಿನ ಕಳೆದ. ತನಗೆ ಆಶ್ರಯವಿತ್ತ ಎಸೆಕ್ಸ್‍ನ ಆರ್ಲ್‍ನಿಗೆ ವಿರೋಧ ಬಗೆದವ, ಸಮಯ ಸಾಧಕ ಎಂಬ ಆರೋಪಗಳು ಬೇಕನ್ ಬಗ್ಗೆ ಇವೆ. 

	ಬೇಕನ್ ಪ್ರಖ್ಯಾತನಾಗಿರುವುದು ರಾಜಕಾರಣಿಯಾಗಿ ಅಲ್ಲ, ಸಾಹಿತಿಯಾಗಿ, ಇವನ ಕೃತಿಗಳನ್ನು ತತ್ತ್ವಶಾಸ್ತ್ರ, ನ್ಯಾಯಶಾಸ್ತ್ರ, ಸಾಹಿತ್ಯ-ಹೀಗೆ ಮೂರು ಗುಂಪಾಗಿ ವಿಂಗಡಿಸಬಹುದು. ತತ್ತ್ವಶಾಸ್ತ್ರದ ಕೃತಿಗಳಲ್ಲಿ ಮುಖ್ಯವಾದವು ದಿ ಅಡ್ವಾನ್ಸ್‍ಮೆಂಟ್ ಆಫ್ ಲರ್ನಿಂಗ್ (1605) ನೊವಮ್ ಅರ್ಗನಮ್ (1620) ಮತ್ತು ದಿ ಆಗ್‍ಮೆಂಟಿಸ್ ಸೈಂಟಿಯರಮ್ (1623). ಸಾಹಿತ್ಯದಲ್ಲಿ ಕೃತಿಗಳಲ್ಲಿ ಬಹುಮುಖ್ಯವಾದದ್ದು ಎಸ್ಸೇಸ್ (ಮೊದಲ ಪ್ರಕಟಣೆ 1597) ಇದಲ್ಲದೆ ನ್ಯೂ ಅಟ್ಲಾಂಟಿನ್ (1626), ಏಳನೆಯ ಹೆನ್ರಿಯ ಚರಿತ್ರೆ (1622) ಎಂಬ ಕೃತಿಗಳನ್ನೂ ಈತ ರಚಿಸಿದ್ದಾನೆ. 

	ಎಸ್ಸೇಸ್ ಎಂಬ ಪ್ರಸಿದ್ಧ ಗ್ರಂಥದ ಪ್ರಕಟಣೆ ವಾಸ್ತವವಾಗಿ ಆರಂಭವಾದದ್ದು ಟಿಪ್ಪಣಿ ರೂಪಕ ಲೇಖನಗಳಿಂದ. ಬೇಕನ್ ಇಂಥ ಕೆಲವು ಲೇಖನಗಳನ್ನು ಆಯ್ದು 1597ರಲ್ಲಿ ಪ್ರಕಟಿಸಿದ. ಇವಕ್ಕೆ ದೊರೆತ ಸ್ವಾಗತ ಬೇಕನ್ ಇಂಥ ಲೇಖನಗಳ ಸಂಖ್ಯೆಯನ್ನು ಹೆಚ್ಚಿಸಿ (1597ರಲ್ಲಿ 10, 1625ರಲ್ಲಿ 58) ತಿದ್ದಿ ಪ್ರಕಟಿಸಲು ಪ್ರೇರಣೆ ನೀಡಿತು. ದೇಶದ ಆಡಳಿತ, ವೈಯಕ್ತಿಕ ಜೀವನ, ಅಮೂರ್ತ ವಿಷಯಗಳು, ನಿಸರ್ಗ-ಈ ಪ್ರಬಂಧಗಳಿಗೆ ವಿಷಯಗಳನ್ನೊದಗಿಸಿದೆ. ಮಾಂಟೇನ್, ಲ್ಯಾಮ್ ಅವರಂತೆ ಬೇಕನ್ ತನ್ನ ವ್ಯಕ್ತಿತ್ವ ನಿಸ್ಸಂಕೋಚವಾಗಿ ಅಭಿವ್ಯಕ್ತಿ ಗೊಳ್ಳಲು ಬಿಡುವ ಲಲಿತ ಪ್ರಬಂಧಕಾರನಲ್ಲ. ಈತ ವ್ಯಕ್ತಿ ಸ್ವರೂಪವೇ ಇಲ್ಲದಂತೆ ಉಪದೇಶ ಮನೋಧರ್ಮದಿಂದ ಬರೆಯುವವ. ಒಟ್ಟಿನಲ್ಲಿ ಪ್ರಾಪಂಚಿಕ ಯಶಸ್ಸು ಈತನ ಗುರಿ. `ನ್ಯಾಯವಾಗಿ ನಡೆ, ಸತ್ಯವನ್ನು ಹೇಳು-ನಿನಗೆ ಅನಾನುಕೂಲವಲ್ಲದಿದ್ದರೆ ಎನ್ನುವುದು ಇವರ ಧೋರಣೆ. ಜೀವನ ತನ್ನ ನೇರವಾದ ಅಭ್ಯಾಸವೇ ಇವನ ಉಪದೇಶಗಳ ಅಸ್ತಿಭಾರ. ಇವನ ಶೈಲಿಸಾರೋಕ್ತಿ ರೂಪದಲ್ಲಿದ್ದು ಲಾಲಿತ್ಯವಿಲ್ಲದ, ಬಿಗಿಯಾದ ಬಂಧದ, ಗಹನವಾದರೂ ಸ್ಪಷ್ಟವೂ ಅಲಂಕಾರ ಹಿತವೂ ಆಗಿದೆ. ಅಲ್ಲಲ್ಲಿ ಕಾವ್ಯ ಸಹಜವಾದ ಪ್ರತಿಮೆಗಳು ಕಂಡುಬರುತ್ತವೆ. ಇವರ ಪ್ರಬಂಧಗಳು ಹಲವು ವಾಕ್ಯಗಳು ಜನಸಾಮಾನ್ಯರ ಬಳಕೆಯ ಗಾದೆಗಳು. ``ನಾಲ್ಕು ಬಗೆಯ ಮೂರ್ತಿಗಳು ಮನುಷ್ಯನ ಮನಸ್ಸನ್ನು ಕಾಡುತ್ತವೆ. ಬಣ್ಣದ ಮೂರ್ತಿಗಳು, ಗುಹೆಯ ಮೂರ್ತಿಗಳು, ಸಂತೆಯ ಮೂರ್ತಿಗಳು ಮತ್ತು ನಾಟಕ ಮಂದಿರದ ಮೂರ್ತಿಗಳು; ಕೆಲವು ಪುಸ್ತಕಗಳನ್ನು ರುಚಿನೋಡಬೇಕು, ಕೆಲವನ್ನು ನುಂಗಬೇಕು, ಕೆಲವನ್ನು ಮೆಲುಕು ಹಾಕಿ ಜೀರ್ಣಿಸಿ ಕೊಳ್ಳಬೇಕು; ಪತ್ನಿಯರು ತರುಣರಿಗೆ ಪ್ರೇಯಸಿಯರು, ಮಧ್ಯ ವಯಸ್ಸಿನಲ್ಲಿ ಸಂಗಾತಿಗಳು, ವೃದ್ಧಾಪ್ಯದಲ್ಲಿ ದಾದಿಯರು ಇಂಥ ಜೀವನಾನುಭವ ತುಂಬಿದ ನುಡಿಗಳು ಇವರ ಕೃತಿಗಳಲ್ಲಿ ಅಪಾರವಾಗಿದೆ. 

	ಬೇಕನ್ ತನ್ನ ಮೂವತ್ತನೆಯ ವಯಸ್ಸಿನಲ್ಲಿ `ಸಮಸ್ತ ಜ್ಞಾನವನ್ನೂ ನನ್ನ ಕ್ಷೇತ್ರವಾಗಿ ಭಾವಿಸಿಕೊಂಡಿರುವೆ ಎಂದು ಒಂದು ಪತ್ರದಲ್ಲಿ ಬರೆದಿದ್ದಾನೆ. ವಿಚಾರಣಾ ಸ್ವಾತಂತ್ರ್ಯ ಅನುಸರಿಸಿ ಹೊಸ ಹಾದಿ ತುಳಿದ. ಶುಷ್ಕ ಪಾಂಡಿತ್ಯದ ನಿರರ್ಥಕತೆ ಕಂಡುಕೊಂಡ ಈತ ಪ್ರಕೃತಿಯ ವಿಷಯದಲ್ಲಿ ವಸ್ತುನಿಷ್ಠ ಮನೋಭಾವ ತಳೆದು ಪ್ರತ್ಯಕ್ಷ ಪ್ರಯೋಗಗಳ ಮಹತ್ವ ಸಾರಿದ. ಪ್ರಯೋಗದ ಆಧಾರದ ಮೇಲೆ ಸಂಶೋಧನೆ ನಡೆಸುವ ಆಧುನಿಕ ವೈಜ್ಞಾನಿಕ ಮನೋಧರ್ಮ ಕೊಟ್ಟವನೆಂದು ವಿಜ್ಞಾನಿಗಳು ಇವನನ್ನು ಗೌರವಿಸುವುದುಂಟು. ಆದರೆ ಮನೋಧರ್ಮದಲ್ಲಿ ಆಧುನಿಕನಾದ ಬೇಕನ್ ಭಾಷೆಯ ವಿಷಯದಲ್ಲಿ ಬಹಳ ಮಟ್ಟಿಗೆ ಸಂಪ್ರದಾಯಕ್ಕೆ ಶರಣಾದವ. ಲ್ಯಾಟಿನ್ ಭಾಷೆಯೇ ಚಿರಕಾಲ ಉಳಿಯುವ ಭಾಷೆಯೆಂದು ನಂಬಿದ್ದ. ಮಹತ್ತ್ವ ಪೂರ್ಣವೆಂದೆಣಿಸಿದ ಗ್ರಂಥಗಳನ್ನು ಆಭಾಷೆಯಲ್ಲಿಯೇ ರಚಿಸಿದ. ಬೇಕನ್ ಇಂಗ್ಲೆಂಡಿನ ಗದ್ಯ ಸಾಹಿತಿಗಳಲ್ಲಿ ಚಾರಿತ್ರಿಕ ದೃಷ್ಟಿಯಿಂದಲೂ ಸಾಧನೆಯ ದೃಷ್ಟಿಯಿಂದಲೂ ಮೊದಲ ಪಂಕ್ತಿಗೆ ಸೇರಿದ. ಇವನು ಷೇಕ್ಸ್ ಪಿಯರನ ನಾಟಕಗಳ ನಿಜವಾದ ಕರ್ತೃ ಎನ್ನುವ ವಾದವನ್ನು ಕೆಲವರು ಮಂಡಿಸುವವರಿದ್ದಾರೆ. ಆದರೆ ಈ ವಾದದಲ್ಲಿ ಸತ್ಯಾಂಶವಿಲ್ಲ ಎಂಬುದು ವಿದ್ವಾಂಸರ ಅಭಿಪ್ರಾಯ. 					
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ